ತಾಳಿಕೋಟೆಯ ಕದನದಲ್ಲಿ - ಕೆಲವು ಪ್ರಶ್ನೆಗಳು

Posted on: 17 Sep 2018

Category: Kannada Blog

Blog Views: 2715

 


ಸೂಚನೆ: ಈ ಬ್ಲಾಗ್ ನಲ್ಲಿ ನನ್ನ ಕಾದಂಬರಿ “ತಾಳಿಕೋಟೆಯ ಕದನದಲ್ಲಿ” ಬಗ್ಗೆ spoilers ಇದೆ. ಆದ್ದರಿಂದ ಕಾದಂಬರಿ ಓದಿ ಮುಗಿಸಿದವರು ಮಾತ್ರ ಈ ಬ್ಲಾಗ್ ಓದಿ. ಪುಸ್ತಕ ಕೊಳ್ಳಲು http://www.vittalshenoy.com/books


 

ಈ ಬ್ಲಾಗ್ ಬರೆಯುವಾಗ “ತಾಳಿಕೋಟೆಯ ಕದನದಲ್ಲಿ” ಕಾದಂಬರಿ ಬಿಡುಗಡೆಯಾಗಿ ಒಂದೂವರೆ ತಿಂಗಳಾಗಿದೆ. ಕಳೆದ ಕೆಲವು ವಾರಗಳಲ್ಲಿ ನನ್ನ ಅನೇಕ ಬಂಧು ಮಿತ್ರರು, ಓದುಗರ ಪರಿಚಯ ಮತ್ತು ಪುನರ್ಸಂಪರ್ಕವಾಗಿದೆ. ಪ್ರತಿದಿನ ಒಬ್ಬಿಬ್ಬರು ಕರೆ ಅಥವಾ whatsapp ಮಾಡಿ ಪ್ರತಿಕ್ರಿಯೆ ಕೊಡುತ್ತಿದ್ದಾರೆ, ಪ್ರತಿಕ್ರಿಯೆ ವ್ಯಕ್ತ ಪಡಿಸಿದ ಎಲ್ಲರಿಗೂ ಧನ್ಯವಾದಗಳು. ಕಾದಂಬರಿಯ ಕೆಲವು ಸೂಕ್ಷ್ಮ ಅಂಶಗಳನ್ನು ಇಲ್ಲಿ ತಿಳಿಯಪಡಿಸುತ್ತೇನೆ ಹಾಗೂ ನಿಮ್ಮಲ್ಲಿ ಇರುವ ಕೆಲವು ಪ್ರಶ್ನೆಗಳನ್ನು ಉತ್ತರಿಸಲು ಪ್ರಯತ್ನಿಸುತ್ತೇನೆ.

 

ಬರವಣಿಗೆ ಯಾಕಿಷ್ಟು ಸರಳವಾಗಿದೆ?

ಪುಸ್ತಕದ ಇಡೀ ಕತೆಯನ್ನು ಕಥಾನಾಯಕ ಬರೆಯುತ್ತಿದ್ದಾನೆ. ಈಗಾಗಲೇ ನೀವು ಓದಿರುವಂತೆ ನಾಯಕನಿಗೆ schizophrenia ಎಂಬ ಮನೋರೋಗ ಇರುತ್ತದೆ. ಇಂತಹ ರೋಗ ಇರುವವರ ಮಾತು ಮತ್ತು ಬರಹಗಳು ಸರಳ ಹಾಗೂ ಅಪಕ್ವವಾಗಿರುತ್ತದೆ. ಈ ವಿಷಯವನ್ನು ಗಮನವಿಟ್ಟುಕೊಂಡೇ ಪುಸ್ತಕದ ಕನ್ನಡದಲ್ಲಿ ಸ್ವಲ್ಪ ಮಾರ್ಪಾಡುಗಳನ್ನು ಮಾಡಿದ್ದೇನೆ. ಉದ್ದೇಶ ಪೂರ್ವಕವಾಗಿ ಭಾಷೆಯನ್ನು ಸರಳಗೊಳಿಸಿದ್ದೇನೆ. ಉದಾಹರಣೆಗೆ ಪುಸ್ತಕದಿಂದಲೇ ಎತ್ತಿದ ಒಂದೆರಡು ವಾಕ್ಯಗಳು ಇಲ್ಲಿದೆ:

“ನಾನು ಪುಸ್ತಕ ತೆರೆದೊಡನೆ ಯೋಧರು ದೇವಸ್ಥಾನ ನೋಡಲು ಮುಂದೆ ಸಾಗಿದ್ದರು. ಅವರು ಎಲ್ಲಿ ಹೋದರಂತ ದೃಷ್ಟಿ ಹಾಯಿಸಿದೆ. ಅವರು ಎಲ್ಲೂ ಕಾಣಲಿಲ್ಲ. ಯೋಧರು ಕಣ್ಮರೆಯಾಗಿದ್ದರು! ನಾನು ಆಶ್ಚರ್ಯವಾಗಿ ದೇವಸ್ಥಾನದ ಹೊರಗೂ ಒಮ್ಮೆ ಹೋಗಿ ನೋಡಿದೆ. ಅಲ್ಲಿ ವಿಶ್ವನಾಥ್ ಚಪ್ಪಲಿ ತೆಗೆಯುತ್ತಿದ್ದ. ವಿಶ್ವನಾಥನ ಮುಖ ನೋಡಿದಾಕ್ಷಣ ದೇವಿಕಾ ಮತ್ತು ಇವನ ಸಂಬಂಧದ ನೆನಪಾಯಿತು.”

ಇದು ವೈಕುಂಠರಾಯರು ಬರೆದಂತೆ. ಇದನ್ನು ಸಂಕ್ಷಿಪ್ತವಾಗಿ, ಸಾಹಿತ್ಯಾಭಿರುಚಿಗೋಸ್ಕರ ಹೀಗೆ ಬರೆಯಬಹುದು:

“ಪುಸ್ತಕ ತೆರೆದೊಡನೆ ಯೋಧರು ದೇವಸ್ಥಾನ ನೋಡಲು ಮುಂದೆ ಸಾಗಿದ್ದರು, ದೂರ ದೂರಕ್ಕೂ ದೃಷ್ಟಿ ಹಾಯಿಸಿದರೂ ಅವರು ಕಾಣಲಿಲ್ಲ. ಆಶ್ಚರ್ಯವಾಗಿ ದೇವಸ್ಥಾನದ ಹೊರಗೂ ನಾನೊಮ್ಮೆ ನೋಡಿದೆ, ಅಲ್ಲಿ ವಿಶ್ವನಾಥ್ ಚಪ್ಪಲಿ ತೆಗೆಯುತ್ತಿದ್ದ. ಅವನ ಮುಖ ನೋಡಿದಾಕ್ಷಣ ದೇವಿಕಾ ಜೊತೆಗಿದ್ದ ಅವನ ಸಂಬಂಧದ ನೆನಪಾಯಿತು.”

ಪಳಗಿದ ಲೇಖಕರು ಇನ್ನೂ ಅಂದವಾಗಿ ಬರೆಯಬಹುದು. ಆದರೆ ಈ ಕತೆ ಹೇಳುವುದು ಲೇಖಕನಲ್ಲ. ರೋಗದ ಪ್ರಭಾವಕ್ಕೊಳಗಾದ ಕಥಾನಾಯಕನ ಮೂಲಕ ಲೇಖಕ ಹೇಳುತ್ತಿದ್ದಾನೆ. ಆದುದರಿಂದ ಅನೇಕ ಕಡೆ ಭಾಷೆ ಸರಳ ಮತ್ತು ವಿಚಿತ್ರವಾಗಿಯೂ ಕೂಡಾ ಇದೆ. ಹೀಗೆ ಬರೆದಿರುವುದರಿಂದ ಹಿಂದೆ ಕನ್ನಡ ಓದಿರದ ಅನೇಕ ಓದುಗರು ಈ ಪುಸ್ತಕವನ್ನೆತ್ತಿ ಮೆಚ್ಚಿದ್ದಾರೆ. ಹಲವು ಕಾಲದ ನಂತರ ಓದುವವರು ಕೂಡಾ ಈ ಬರಹವನ್ನು ಶ್ಲಾಘಿಸಿದ್ದಾರೆ.

“ಲೋಫರ್” ಎಂಬ ಶಬ್ದ ಅತಿಯಾಗಿ ಬಳಸಿದ್ದೀರಿ, ಏಕೆ ?

Schizophrenia ರೋಗಿಗಳು ಕೆಟ್ಟ ಶಬ್ದಗಳು, ಅವಾಚ್ಯ ಪದಗಳನ್ನು ಪದೇ ಪದೇ ಬಳಸುತ್ತಾರೆ. ಅವರು ಮುಂಗೋಪಿಗಳು ಆಗಿರುತ್ತಾರೆ. ಆದುದರಿಂದ ಕೆಟ್ಟ ಕೆಲವು ಶಬ್ದಗಳು ವೈಕುಂಠನ ಮಾತಿನಲ್ಲಿ ಅಡಗಿವೆ. ನಾನು ಓದಿದ ಪ್ರಕಾರ ಇನ್ನೂ ಅವಾಚ್ಯ ಶಬ್ದಗಳನ್ನು ಹೇಳುತ್ತಾರಂತೆ!

ಕೊನೆಯಲ್ಲಿ Schizophrenia ರೋಗವನ್ನು ಗುಣಪಡಿಸಲು ಬಳಸಿದ ತಂತ್ರ ನಿಜವೇ?

ಖಂಡಿತ ಇಲ್ಲ. ಈ ರೋಗಕ್ಕೆ ಶಾಶ್ವತವಾದ ಮದ್ದಂತೂ ಇಲ್ಲವೇ ಇಲ್ಲ. ಗುಣಪಡಿಸುವ ಹೊಸ ಹೊಸ ವಿಧಾನಗಳನ್ನು ಜಗತ್ತಿನಾದ್ಯಂತ ತಜ್ಞರು ಇನ್ನೂ ಹುಡುಕುತ್ತಿದ್ದಾರೆ. ಕತೆಯಲ್ಲಿ ಹೇಳಿರುವ ವಿಧಾನ ನನ್ನದೇ ಊಹೆ ಮತ್ತು ಕಥೆಗೆ ಅನುಗುಣವಾಗಿ ಮಾಡಿರುವುದು. ಇಂತಹ ವಿಧಾನ ರಂಜನಾತ್ಮಕ ಎಂದು ಕೆಲವರು ಹೇಳಿದ್ದರೆ, ಇಂತಹ ರೋಗಿಗಳ ಒಡನಾಟದಲ್ಲಿದ್ದವರು ಈ ವಿಧಾನ ಸೂಕ್ತವಾಗಿದೆ, ಉತ್ಪ್ರೇಕ್ಷೆ ಏನೂ ಇಲ್ಲ ಎಂದು ಹೇಳಿದ್ದಾರೆ. ಒಬ್ಬ ಕಥೆಗಾರನಾಗಿ ಗುಣಪಡಿಸುವ ಕಾಲ್ಪನಿಕ ವಿಧಾನವೊಂದನ್ನು ಬಳಸಿದ್ದೇನೆ. ಅಚಾತುರ್ಯ ಅನಿಸಿದರೆ ಕ್ಷಮಿಸಿ.

ಗಿಲಾನಿ ಸಹೋದರರು ಮಾಡಿದ ದ್ರೋಹ ನಿಜವೇ? 

ಕಾದಂಬರಿ ಕಾಲ್ಪನಿಕವಾದರೂ ಇದರಲ್ಲಿ ಹಲವು ಸತ್ಯಗಳಿವೆ. ಇತಿಹಾಸದ ಪುಟಗಳನ್ನು ಹುಡುಕಿದರೆ ತಾಳಿಕೋಟೆಯ ಕದನದಲ್ಲಿ ಗಿಲಾನಿ ಸಹೋದರರು ಮಾಡಿದ ದ್ರೋಹಗಳು ಅನೇಕ ಕಡೆ ಉಲ್ಲೇಖವಾಗಿದೆ. ಇದಕ್ಕೆ ನಾವು ಜಾತಿ ಮತ್ತು ಕೋಮಿನ ಬಣ್ಣ ಬಳಿಯುವುದು ಬೇಡ. ನಮ್ಮ ಚರಿತ್ರೆಯು ಶಾಲಾ ಪಾಠಗಳಲ್ಲಿ ಕೆಲವು ಕಡೆ ಸತ್ಯವನ್ನು ಹೇಳಲು ವಿಫಲವಾಗಿವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಇಷ್ಟ ಇರುವವರು ಅಂತರ್ಜಾಲದಲ್ಲೇ ಸಂಗ್ರಹಿಸಬಹುದು.

ಬೆಂಡೋಲೆ ಎಂಬ ಆಭರಣ ಕೈಗೆ ಹಾಕುತ್ತಾರಾ?

ಇಲ್ಲ. ಬೆಂಡೋಲೆ ಕಿವಿಗೆ ಹಾಕುವ ಆಭರಣ. ಇದನ್ನು ಕೈಗೆ ಹಾಕುವುದು ಅಂತ ಹೇಳಿ ನಾನು ತಪ್ಪು ಬರೆದಿದ್ದೇನೆ. ಬಹುಶಃ ಓಲಗ ಅಥವಾ ಬಾಜು ಬಂಧಿ ಅಂತ ಹೇಳಬೇಕಿತ್ತು. ಸೂಕ್ತ ಹೆಸರಿದ್ದರೆ ಕಾಮೆಂಟ್ ಹಾಕಿ, ನನ್ನ ಮಾಹಿತಿಗಾಗಿ. ಆಭರಣಗಳ ಬಗ್ಗೆ ಹೆಚ್ಚು ಜ್ಞಾನ ಇದ್ದವರು ಈ ತಪ್ಪನ್ನು ಸುಲಭವಾಗಿ ಹಿಡಿದಿದ್ದಾರೆ. ಈ ತಪ್ಪನ್ನು ಮನೋರೋಗಿ ಮಾಡಿದ್ದಾನೆ ಅಂತ ಸಂಕೋಚದಿಂದ ಹೇಳಿ ಈ ವಿಷಯ ಇಲ್ಲೇ ಮುಗಿಸುತ್ತೇನೆ.

ಓದುತ್ತಾ ಓದುತ್ತಾ ನನ್ನ ಬಳಿ ಸಂಗ್ರಹವಾದ ಸಂದೇಹಗಳನ್ನೆಲ್ಲಾ ಕೊನೆಯ ಅಧ್ಯಾಯದಲ್ಲಿ ಚೆನ್ನಾಗಿ ವಿವರಿಸಿದ್ದೀರಿ, ಇದರ ರಹಸ್ಯವೇನು?

ನಾನು ಮೊದಲು ಬರೆಯಲು ಎತ್ತಿದ್ದು ಕೊನೆಯ ಅಧ್ಯಾಯ. ಅಂದರೆ ಕೊನೆಯ ಅಧ್ಯಾಯ ಮೊದಲು ಬರೆದು ನಂತರ ಮೊದಲಿನಿಂದ ಅಧ್ಯಾಯಗಳನ್ನು ಬರೆದೆ. ಈ ತರಹದ ಕತೆಗೆ ಎಲ್ಲೂ ಸಡಿಲವಾದ ತುದಿಗಳು (loose ends) ಇರಬಾರದು, ಈ ಕಾರಣದಿಂದ ಈ ರೀತಿಯ ಪ್ರಯೋಗ ಮಾಡಿದೆ. ಆದರೂ ಒಂದೆರಡು ತಪ್ಪುಗಳನ್ನು ಮೊದಲ ಆವೃತ್ತಿಯಲ್ಲಿ ನನ್ನ ಮಿತ್ರ ಸತೀಶ್ ಸಿಂದೋಗಿ ಮತ್ತು ನನ್ನ ಪತ್ನಿ ಹುಡುಕಿ ಸಹಾಯ ಮಾಡಿದರು. ಇಬ್ಬರಿಗೂ ಧನ್ಯವಾದಗಳು. ನಿಮಗೆ ಅಂತ್ಯ ತಿಳಿದ ಮೇಲೆ ಮತ್ತೆ ಮೊದಲ ಅಧ್ಯಾಯಗಳನ್ನು ಓದಿ ನೋಡಿ. ವಿಶ್ವನಾಥ್ ಯಾವತ್ತೂ ವೈಕುಂಠನನ್ನು ಬಿಟ್ಟು ಬೇರೆ ಯಾವ ಪಾತ್ರದೊಂದಿಗೂ ಮಾತಾಡುವುದಿಲ್ಲ. ಕೇವಲ ಹೊಸಪೇಟೆಗೆ ಹೊರಟ ಬಸ್ಸಿನಲ್ಲಿ ಮಾತ್ರ ದೇವಿಕಾಗೆ ವಿಶ್ವನಾಥ್ ನಮಸ್ಕಾರ ಮಾಡುತ್ತಾನೆ. ಅದೇ ತರಹ ತ್ರಿವಿಕ್ರಮ ಮತ್ತು ಮಲ್ಲಣ್ಣರು ಮೊದ ಮೊದಲು (ಅಂದರೆ Schizophrenia ದ ಉಲ್ಲೇಖ ಬರುವ ಮೊದಲು) ವೈಕುಂಠ ಇರುವ ಕಡೆ ಮಾತ್ರ ಬರುತ್ತಾರೆ. ಪುಸ್ತಕದುದ್ದಕ್ಕೂ ಈ ತರಹ ಕೆಲವು ನಿಯಮಗಳನ್ನು ಕಾಪಾಡಿಕೊಂಡು ಬಂದಿದ್ದೇನೆ.

ವಿವರಣೆಗಳ ಕೊರತೆ ಇತ್ತು, ಸಿನಿಮೀಯವಾಗಿತ್ತು. ಯಾಕೆ?

ಈ ಮೊದಲೇ ಹೇಳಿದಂತೆ ಕಥಾನಾಯಕನ ಮನಸ್ಥಿತಿ ಪರಿಗಣಿಸಿ ಪುಸ್ತಕವನ್ನು ಬರೆಯಲಾಗಿದೆ. ಇನ್ನು ಸಿನಿಮೀಯವಾಗಿದೆ ಎನ್ನುವ ಅಂಶ ಸರಿಯಾಗಿದೆ. ನಾನು ಬರವಣಿಗೆಯಲ್ಲಿ ಸಿನೆಮಾದ ಚಿತ್ರಕಥಾ ತಂತ್ರಗಳನ್ನು ಬಳಸಿದ್ದೇನೆ. ಚಿತ್ರಕಥೆಯ ಬರವಣಿಗೆಯಲ್ಲಿ ಆರಂಭ, ನಡುವು, ಅಂತ್ಯ ಎಂಬ ಮೂರು ಭಾಗಗಳು (3 acts) ಇರುತ್ತವೆ. ಮೊದಲ ಭಾಗದಲ್ಲಿ ಕಥೆಯ ತಿರುಳು, ಸಂಘರ್ಷ (conflict) ಕಾಣಬೇಕು. ಮಧ್ಯ ಭಾಗದಲ್ಲಿ ಆ ಸಂಘರ್ಷ ಒಂದು ಸಮಸ್ಯೆಯಾಗಿ ಪರಿವರ್ತಿತವಾಗಬೇಕು. ಅಂತ್ಯದಲ್ಲಿ ಅದರ ಪರಿಹಾರವಾಗಬೇಕು. ಇದೇ ತರಹ ನಾನು ಕಥೆ ಬೆಳೆಸಿ ಹೋಗಿದ್ದರಿಂದ ಬಹುಶಃ ಸಿನಿಮೀಯವಾಗಿತ್ತು. ಇದನ್ನು ನಾನು complement ಅಂತ ಎಣಿಸುತ್ತೇನೆ. ಒಂದು ಒಳ್ಳೆಯ ಸಿನಿಮಾ ಅಥವಾ ಪುಸ್ತಕದಲ್ಲಿ ಒಳ್ಳೊಳ್ಳೆಯ ಪಾತ್ರಗಳು ಇರಬೇಕು. ಆ ಪಾತ್ರಗಳಿಗೆ ಅವರದೇ ಆದ ಸಮಸ್ಯೆಗಳು ಇರಬೇಕು. ಆ ಸಮಸ್ಯೆಗಳು ಪರಿಹಾರವಾಗಬೇಕು. ಕತೆ ಮುಗಿದ ಮೇಲೆ ಮುಖ್ಯವಾದ ಪಾತ್ರಗಳಲ್ಲಿ ಪರಿವರ್ತನೆ ತೋರಿ ಬರಬೇಕು. ಇದಕ್ಕೆ character arc ಅಂತ ಹೇಳುತ್ತಾರೆ, ಇದು ಇದ್ದರೆ ಮಾತ್ರ ಕತೆಗೆ ಸೊಗಸು, ಅದು ಯಾವುದೇ ಕತೆ ಇರಲಿ. ಈ ಎಲ್ಲಾ ಅಂಶಗಳನ್ನು ಕಾದಂಬರಿಯಲ್ಲಿ ಪರಿಗಣಿಸಿದ್ದೇನೆ. ಮುಂದೆಯೂ ಇದೇ ತರಹದ ಸಿನಿಮೀಯ ಕಾದಂಬರಿ ಬರೆಯಲು ಪ್ರಯತ್ನಿಸುತ್ತೇನೆ.

ಚಾರಿತ್ರಿಕ ಕಥೆ, ಗಣೇಶಯ್ಯನವರ ಪುಸ್ತಕದ ತರಹ ಇರಲಿಲ್ಲ

ಪುಸ್ತಕಗಳನ್ನು, ಲೇಖಕರನ್ನು ಹೋಲಿಸುವುದು ತಪ್ಪು. ಡಾ. ಗಣೇಶಯ್ಯನವರು ನನ್ನ ಮೆಚ್ಚಿನ ಬರಹಗಾರರು, ಅವರ ಕರಿಸಿರಿಯಾನ, ಕನಕಮುಸುಕು ಕಾದಂಬರಿಗಳು ನನಗೆ ಅಚ್ಚುಮೆಚ್ಚು. ಅವರ ಕಥೆ, ಅವರ ಶೈಲಿ ಕೇವಲ ಅವರೇ ಬರೆಯಬಹುದು. ನನ್ನ ಕಥೆಯೇ ಬೇರೆ ತರಹ. ಈ ಬಗ್ಗೆ ಜನರಿಗೆ ಎಚ್ಚರಿಸಲು ನನ್ನ ತಾಣದಲ್ಲಿ ಕಥೆಯ ಸಾರ, ಕೆಲವು ಪುಟಗಳ ತುಣುಕು ಹಾಕಿದ್ದೆ. ಇದು ಪೂರ್ತಿ ಐತಿಹಾಸಿಕ ಪುಸ್ತಕವಲ್ಲ ಅಂತ ನಾನೇ ಹೇಳಿದ್ದೇನೆ. ಆದುದರಿಂದ ಆ ಅಪೇಕ್ಷೆಯನ್ನಿಟ್ಟು ಓದಬಾರದಿತ್ತು. ಒಬ್ಬ ಲೇಖಕ ಇನ್ನೊಬ್ಬ ಲೇಖಕನನ್ನು ಅನುಸರಿಸಿ ಬರೆದರೆ ಪ್ರಯೋಜನವೇನು? ಪ್ರತಿಯೊಬ್ಬ ಲೇಖಕನು ತನ್ನದೇ ಆದ ಶೈಲಿಯಲ್ಲಿ ಕಥೆ ಹೇಳಬೇಕೆಂದು ನನ್ನ ಅನಿಸಿಕೆ.

 

ಪುಸ್ತಕವು ಪೂರ್ತಿ ಐತಿಹಾಸಿಕವೂ ಅಲ್ಲ, ಮನೋವೈಜ್ಞಾನಿಕವೂ ಅಲ್ಲ, ಪತ್ತೇದಾರಿಯೂ ಅಲ್ಲ, ಸಾಂಸಾರಿಕವೂ ಅಲ್ಲ. ಯಾವ ವರ್ಗಕ್ಕೆ ಸೇರಿದ್ದು ಈ ಪುಸ್ತಕ?

ನನಗೂ ಗೊತ್ತಿಲ್ಲ. ಆದರೆ ಸುಮಾರು ಓದುಗರು ಒಂದೇ ಗುಕ್ಕಿನಲ್ಲಿ ಓದಿದ್ದಾರೆ, ಕೆಲವರಂತೂ ಇರುವ ಕೆಲಸ ಬಿಟ್ಟು 2-3 ಗಂಟೆಗಳಲ್ಲಿ ಓದಿದ್ದಾರಂತ ಹೇಳಿದ್ದಾರೆ. ಸುಮಾರು ಐವತ್ತಕ್ಕಿಂತ ಹೆಚ್ಚು ಓದುಗರು ನನಗೆ ಕಾದಂಬರಿ ಕುತೂಹಲಕಾರಿಯಾಗಿತ್ತು ಅಂತ ಹೇಳಿದ್ದಾರೆ. ಆದುದರಿಂದ ಕುತೂಹಲಕಾರಿ ಪುಸ್ತಕ ಎಂದು ಕರೆಯೋಣವೇ? 

 

ಪುಸ್ತಕವನ್ನು ಕೊಂಡು ಓದಿ ಸಲಹಿದ ಎಲ್ಲಾ ಓದುಗರಿಗೆ ಮತ್ತೊಮ್ಮೆ ಧನ್ಯವಾದಗಳು.

 

Tags: ತಾಳಿಕೋಟೆಯ ಕದನದಲ್ಲಿ