ನೀನು ನಿನ್ನೊಳಗೆ ಖೈದಿ

Posted on: 02 Dec 2018

Category: Book Review

Blog Views: 2099

Image result for neenu ninnolage khaidi

 

ಪುಸ್ತಕ: ನೀನು ನಿನ್ನೊಳಗೆ ಖೈದಿ

ಲೇಖಕರು: ಅನುಷ್ ಎ ಶೆಟ್ಟಿ
ಪ್ರಕಾಶಕರು: ಅನುಗ್ರಹ ಪ್ರಕಾಶನ

"ನಾನೊಬ್ಬ ಪುಸ್ತಕ ಪ್ರೇಮಿ" ಎಂಬ ಫೇಸ್ಬುಕ್ ಗುಂಪಿನ ವಿಮರ್ಶೆಗಳನ್ನು ನೋಡಿ ಕೈಗೆತ್ತಿಕೊಂಡ ಈ ಪುಸ್ತಕ ನನ್ನ ನಿರೀಕ್ಷೆಗೂ ಮೀರಿ ಇಷ್ಟವಾಯಿತು. ಗಿಲ್ಬರ್ಟ್ ಎಂಬ ಖೈದಿಯೊಬ್ಬ ಕಾಲಾಘಾಟಿ ಜೈಲಿನಿಂದ ಮಾಯವಾದಾಗ ಇಡೀ ಪೋಲಿಸ್ ಪಂಗಡಕ್ಕೆ ಅಚ್ಚರಿಯಾಗಿ, ಖೈದಿ ಹೇಗೆ ಪರಾರಿಯಾದ ಎಂಬುದು ಕಬ್ಬಿಣದ ಕಡಲೆಯಾಗಿ ಉಳಿಯುತ್ತದೆ. ತಮ್ಮಿಂದ ಈ ಕೇಸ್ ಬಗೆಹರಿಸಲು ಅಸಾಧ್ಯವಾದಾಗ, ಚೈತನ್ಯ ಮತ್ತು ಮಾಧವ್ ಎಂಬ ಡಿಟೆಕ್ಟಿವ್ ಇಬ್ಬರನ್ನು ಕರೆಸುತ್ತಾರೆ. ಗಿಲ್ಬರ್ಟ್ ನ ಡೈರಿ ಕೈಗೆ ಸಿಕ್ಕ ಅವರು, ಅದನ್ನು ಓದುತ್ತಾ ಈ ಕೇಸ್ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಡೈರಿಯಲ್ಲಿ ಬರೆದದ್ದು ಏನು? ಗಿಲ್ಬರ್ಟ್ ಯಾರು? ಅವನು ಮಾಡಿದ ಅಪರಾಧವಾದರೂ ಏನು? ಅವನು ಜೈಲಿನಿಂದ ಏನೂ ಸುಳಿವು ಬಿಡದೆ ಹೇಗೆ ತಪ್ಪಿಸಿ ಹೋದನು? ಇವೆಲ್ಲವನ್ನೂ ತಿಳಿಯಲು ಪುಸ್ತಕ ಓದಬೇಕು. 

ಒಬ್ಬ ಹವ್ಯಾಸಿ ಲೇಖಕನಾಗಿ ನನಗೆ ಈ ಪುಸ್ತಕದಲ್ಲಿ ಖುಷಿ ಕೊಟ್ಟ ಅಂಶಗಳು ಈ ರೀತಿ ಇವೆ.

  • ಒಂದು ಪುಸ್ತಕಕ್ಕೆ ಉತ್ತಮ ಕತೆ ಮಾತ್ರವಲ್ಲದೇ, ಕತೆಯನ್ನು ಪೂರೈಸುವ ಅಷ್ಟೇ ಉತ್ತಮ ಪಾತ್ರಗಳು ಕೂಡಾ ಬೇಕು. ಗಿಲ್ಬರ್ಟ್, ರಾವ್, ಶಾರದಾ, ಗಣೇಶ್, ಚೈತನ್ಯ ಮತ್ತು ಮಾಧವ್ ಎಂಬ ಕೆಲವೇ ಪಾತ್ರಗಳನ್ನು ಲೇಖಕರು ಅತ್ಯುತ್ತಮವಾಗಿ ಈ ಕತೆಯಲ್ಲಿ ಪೋಷಿಸಿದ್ದಾರೆ.
  • ಕತೆಯಲ್ಲಿ ಬರುವ ಎಲ್ಲಾ ಪಾತ್ರಗಳು ತಮ್ಮದೇ ಆದ ಉದ್ದೇಶ ಹೊಂದಿದ್ದು, ಅದನ್ನು ಸಾಧಿಸಲು ಹೊರಟ ರೀತಿ ಮತ್ತು ಕತೆಯ ಕೊನೆಯಲ್ಲಿ ಪ್ರಮುಖ ಪಾತ್ರಗಳಾದ ಗಿಲ್ಬರ್ಟ್, ರಾವ್ ಮತ್ತು ಶಾರದಾ ಒಳ್ಳೆಯ ಪರಿವರ್ತನೆ(character-arc) ಕೂಡಾ ಹೊಂದಿರುತ್ತಾರೆ. ಅನೇಕ ಕಡೆ ರಾವ್-ಗಿಲ್ಬರ್ಟ್ ಪಾತ್ರಗಳ ಜೋಡಿ, ಕರ್ವಾಲೋ ಕಾದಂಬರಿಯ ಕರ್ವಾಲೋ-ಮಂದಣ್ಣ ಜೋಡಿಯ ನೆನಪು ತಂದವು.
  • ಬಹು ಪಾಲು ಕತೆಯು ದೃಶ್ಯ ರೂಪದಲ್ಲಿ, ಡೈರಿ ಒಂದರ ಓದಿನ ನಡು-ನಡುವೆ ಹೇಳಿದ್ದು ಸುಂದರವಾಗಿ ಬಂದಿದೆ, ಒಂದು ಪುಟವೂ ಬೇಸರವಿಲ್ಲ, ಯಾವ ಪುಟವನ್ನೂ ಹಾರಿಸಿ ಓದುವಂತಿಲ್ಲ.
  • ಕತೆಯಲ್ಲಿ ಮೂರು ಭಾಗ (ಆರಂಭ, ಮಧ್ಯ, ಅಂತ್ಯ) ಮತ್ತು ಅದರ ಮಹತ್ವಗಳನ್ನು ಲೇಖಕರು ಕಟ್ಟುನಿಟ್ಟಾಗಿ ಪಾಲಿಸಿದಂತಿದೆ.
  • ನಾನು ಓದಿರುವ ಕನ್ನಡ ಪುಸ್ತಕಗಳಲ್ಲಿ ಇದು ಅತ್ಯಂತ ವಿಭಿನ್ನತೆ ಹೊಂದಿ, ತುಂಬಾ ಇಷ್ಟವಾಗಿದ್ದ ಕೃತಿ. ಮೆದುಳಿಗೆ ಸಾಕಷ್ಟು ಕಸರತ್ತು ಕೊಡುವ ಇಂತಹ ಕತೆಗಳು ಯಾವಾಗಲೂ ವಿಭಿನ್ನ ಮತ್ತು ವಿರಳ.
  • ಮುದ್ರಣಕ್ಕೆ ಬಳಸಿದ ಕಾಗದ ಮತ್ತು ಹಾರ್ಡ್ ಬೌಂಡ್ ಮುಖಪುಟ ಕೂಡಾ ವಿಭಿನ್ನವಾಗಿದೆ. ಅನುಗ್ರಹ ಪ್ರಕಾಶನದವರು ಈ ಪುಸ್ತಕಕ್ಕೆ ಮೆರುಗು ತಂದಿದ್ದಾರೆ.

ಬಿಡುವುಲ್ಲದಿದ್ದರೂ, ಕತೆಯ ಸೆಳೆತದಿಂದ ಬಿಡುವು ಮಾಡಿಕೊಂಡು ನನಗೆ ಎರಡೇ ಗುಕ್ಕಲ್ಲಿ ಓದಿಸಿಕೊಂಡು ಹೋಯಿತು. ಕನ್ನಡದ ಒಂದು ಪ್ರಮುಖ ಚಲನಚಿತ್ರ ಮತ್ತು ಹಾಲಿವುಡ್ ಚಲನಚಿತ್ರದ ನೆನಪು ಕೂಡಾ ಬಂತು. (ಹೆಸರು ಹೇಳಿದರೆ ಇನ್ನೂ ಓದಿರದವರಿಗೆ spoiler / ಓದು ಕೆಡಿಸಿದಂತಾಗುತ್ತದೆ.) 
ಇಂತಹ ಕೃತಿ ನಮಗೆ ಕೊಟ್ಟ ಅನುಷ್ ಶೆಟ್ಟಿಯವರಿಗೆ ತುಂಬು ಹೃದಯದ ಧನ್ಯವಾದಗಳು ಮತ್ತು ಅಭಿನಂದನೆಗಳು. 

 

Tags: ನೀನು ನಿನ್ನೊಳಗೆ ಖೈದಿ, ಅನುಷ್ ಶೆಟ್ಟಿ, ಕನ್ನಡ ಪುಸ್ತಕ