ಸ್ನೇಹ ಸಂಪತ್ತು

Posted on: 13 Jan 2019

Category: Book Review

Blog Views: 1670

ಪುಸ್ತಕ: ಸ್ನೇಹ ಸಂಪತ್ತು

ಲೇಖಕರು: ಎಂ. ನರಸಿಂಹಮೂರ್ತಿ

ಪ್ರಕಾಶಕರು: ಮಾಧ್ಯಮ ಕ್ರಿಯೇಶನ್ಸ್

(ಬಹಳ ಹಿಂದೆ ಸಪ್ನಾ ಬುಕ್ ಹೌಸ್ ನಲ್ಲಿ ಕೊಂಡಿದ್ದೆ. ಈಗ ಸ್ಟಾಕ್ ಇಲ್ಲ! https://www.sapnaonline.com/books/sneha-sampattu-313427)

 

Image result for sneha sampattu

ಇದು ಡಾ. ವಿಷ್ಣುವರ್ಧನ್ ರವನ್ನು ಕುರಿತಾದ ಕೃತಿ. ಅವರ ಜೀವನ ಚರಿತ್ರೆ ಅಲ್ಲದಿದ್ದರೂ, ಅವರ ಜೀವನದ ಅನೇಕ ಸ್ವಾರಸ್ಯಕರ ಘಟನೆಗಳನ್ನು ಒಂದೊಂದಾಗಿ ಬಿಚ್ಚಿಡುವ ಪುಸ್ತಕ. ಲೇಖಕರು ವಿಷ್ಣುರವರ 70-80 ಸ್ನೇಹಿತರನ್ನು ಭೇಟಿ ಮಾಡಿ ಅವರೊಡನೆ ಚರ್ಚಿಸಿ ಹೊರ ತಂದ ಘಟನೆಗಳನ್ನು ಪುಸ್ತಕ ರೂಪದಲ್ಲಿ ಬರೆದಿದ್ದಾರೆ. ಮೇರು ನಟರ ಬದುಕಿನ ಹತ್ತು ಹಲವು ಬಣ್ಣಗಳು ಸುಂದರವಾಗಿ ಲೇಖನಗಳಾಗಿ ಮೂಡಿ ಬಂದಿವೆ. ಈ ಘಟನೆಗಳು ವಿಷ್ಣುರವರ ಬಾಲ್ಯ, ಕಾಲೇಜು ಪರಿಸರ, ಕಾಲೇಜು ಗೆಳೆಯರು, 70ರ ದಶಕದ ಅವರ ನಾಗರಹಾವು ಚಿತ್ರದ ಕಾಲ ಘಟ್ಟ ಇತ್ಯಾದಿಗಳನ್ನೊಳಗೊಂಡಿವೆ. ಅವರ ಆಪ್ತ ತಾರಾ-ಮಿತ್ರರಾದ ಅಂಬರೀಶ್, ಕೆ.ಎಸ್. ಅಶ್ವತ್ಥ್, ಶಿವರಾಂ, ಶ್ರೀನಾಥ್, ದ್ವಾರಕೀಶ್, ಭಾರ್ಗವ, ರಾಜೇಂದ್ರಸಿಂಗ್ ಬಾಬು, ನಾಗತಿಹಳ್ಳಿ ಚಂದ್ರಶೇಖರ್, ರಮೇಶ್ ಭಟ್ ಇವರುಗಳ ಅಂತರ್ಯದ ಮಾತುಗಳಿವೆ. ಕೆಲವು ನಟರು ಮತ್ತು ಮಿತ್ರರ ಜೊತೆ ಅವರು ಸ್ಟಾರ್ ಆದ ಮೇಲೂ ಎಷ್ಟು ನಿಕಟವಾಗಿದ್ದರು ಎಂದು ತಿಳಿಯುತ್ತದೆ.

ಓದುತ್ತಾ ಓದುತ್ತಾ ಕೆಲವು ಘಟನೆಗಳು ವಿಷ್ಣುವರ್ಧನ್ ರವರ ಚೇಷ್ಟೆ, ಹಾಸ್ಯ, ಸಹೃದಯ ಮನೋಭಾವ, ಶಿಸ್ತು, ನೋವು-ನಲಿವು, ಅಂತರ್ಮುಖಿತನ, ಮಹಿಳೆಯರಿಗೆ ಕೊಡುವ ಗೌರವ, ಉದಾರ ಮನಸ್ಸು ಎಲ್ಲವನ್ನೂ ಪರಿಚಯಿಸುತ್ತವೆ. ಒಟ್ಟಿನಲ್ಲಿ ಸುಲಭವಾಗಿ ಯಾವ ಪುಟವನ್ನು ತಿರುವಿಯೂ ಆನಂದಿಸಬಹುದಾದ ಪುಸ್ತಕ. ವಿಷ್ಣು ಅಭಿಮಾನಿಗಳಿಗೆ ರಸದೌತಣ ನೀವು ಓದುತ್ತಾ ಭಾವುಕರಾಗುವುದು ಖಂಡಿತ, ಇತರರಿಗೂ ಉಪಯುಕ್ತ ಮಾಹಿತಿಗಳ ಮಹಾಪೂರ.

ಪುಸ್ತಕದ ಕೊನೆಯಲ್ಲಿ ಅವರ ಸುಂದರ ಭಾವಚಿತ್ರಗಳ ಜೊತೆ ಅಷ್ಟೇ ಸುಂದರವಾದ ಅವರ ಮಾತುಗಳಿವೆ. ಅದರಲ್ಲಿ ನನಗಿಷ್ಟವಾದದ್ದು “ಅನುಭವ ಮಾನವನನ್ನು ತಿದ್ದುತ್ತದೆ, ನಾಲ್ವತ್ತರ ನಂತರವೇ ಮಾನವನ ನಿಜವಾದ ಜೀವನ ಪ್ರಾರಂಭ” ಆ ವಯಸ್ಸನ್ನು ದಾಟಿದವರಿಗೆ ಅದು ನೂರಕ್ಕೆ ನೂರು ಸತ್ಯ ಅನಿಸುತ್ತದೆ.  

 

Tags: Book Review, Kannada Books, Sneha Sampattu