ಜೋಡ್ಪಾಲ - ಅನುಷ್ ಶೆಟ್ಟಿ

Posted on: 01 Mar 2019

Category: Book Review

Blog Views: 2006

 

FB_IMG_1536568137192.jpg

ಪುಸ್ತಕ: ಜೋಡ್ಪಾಲ

ಲೇಖಕರು: ಅನುಷ್ ಶೆಟ್ಟಿ

ಪ್ರಕಾಶಕರು: ಅನುಗ್ರಹ ಪ್ರಕಾಶನ

 

    ಬಹಳ ದಿನದಿಂದ ಓದಬೇಕು ಎಂದು ಇಟ್ಟ ಪುಸ್ತಕ. ಮೊನ್ನೆ ಓದಲು ಶುರು ಮಾಡಿದೆ. ಪ್ರತಿದಿನ ಇಪ್ಪತ್ತು ಪುಟದಂತೆ ಹತ್ತು ದಿನಗಳಲ್ಲಿ ಓದುವ ಯೋಜನೆ ಹಾಕಿದ್ದ ನಾನು ಇದನ್ನು ಎರಡೇ ದಿನ (ವಾರದ ದಿನ, ವಾರಾಂತ್ಯ ಅಲ್ಲ)ಗಳಲ್ಲಿ ಮುಗಿಸಿ ಬಿಟ್ಟೆ. ಇದಕ್ಕಿಂತ ಹೆಚ್ಚು ವಿಮರ್ಶೆ ಏನು ಬೇಕು?

 

   ನನಗೆ ಮೂರು ಭಾಗ (3 act)ಗಳ ಸಿದ್ದಾಂತ ಬಳಸಿ ಬರೆದ ಪುಸ್ತಕ ತುಂಬಾ ಇಷ್ಟವಾಗುತ್ತದೆ. ಮೊದಲ ಭಾಗದಲ್ಲಿ ಸಮಸ್ಯೆ / ಸಂಘರ್ಷ ಉದ್ಭವಿಸುತ್ತದೆ, ಎರಡನೆಯ ಭಾಗದಲ್ಲಿ ಅದು ಉಲ್ಬಣಿಸುತ್ತದೆ. ಕೊನೆಯ ಭಾಗದಲ್ಲಿ ಎಲ್ಲವೂ ಬಗೆ ಹರಿಸುತ್ತದೆ. ಜೋಡ್ಪಾಲದಲ್ಲಿ ಇದು ಎಷ್ಟು ಸಮರ್ಥವಾಗಿದೆಯೆಂದರೆ, ಒಂದು ಭಾಗದಿಂದ ಇನ್ನೊಂದರ ಪರಿವರ್ತನೆ ನಿರರ್ಗಳವಾಗಿ (seamless transition) ಆಗುತ್ತದೆ. ಲೇಖಕರು ಈ ಮೂರೂ ಭಾಗಗಳನ್ನು ಯಾವಾಗ ಮತ್ತು ಹೇಗೆ ಬರೆದಿದ್ದಾರೆ ಎಂಬ ವಿಷಯವನ್ನು ಬಿಚ್ಚಿ ಹೇಳಿದ್ದು ಸ್ವಾಗತಾರ್ಹ.

   ನಿರ್ಜೀವ ವಸ್ತುವಾದ ರೋಡ್ ರೋಲರ್ ಗೆ ಭೀಮ ಎಂಬ ಹೆಸರಿಟ್ಟು ಅದಕ್ಕೆಜೀವ ತುಂಬಿ, ಅದರಲ್ಲಿ ಕಿಟ್ಟಿ ಮತ್ತು ರಾಜು ಎಂಬ ಇಬ್ಬರು ಬಾಲಕರ ಮುಗ್ದತೆಯನ್ನು ತೋರಿಸಿದ ರೀತಿ ಒಂದು ವಿಭಿನ್ನ ಪ್ರಯತ್ನ. ಕತೆಯಲ್ಲಿ ಬರುವ ಪಾತ್ರಗಳೇ ಇದರ ಜೀವಾಳ, ಅವುಗಳ ಒಳಗೆ ಓದುಗ ಹೊಕ್ಕುವುದು ಖಡಾಖಂಡಿತ. ಕ್ವೀನ್ 111 ಹಡಗಿಗೆ ಕತೆಯಲ್ಲಿ ಬರುವ ಪರಿಸ್ಥಿತಿ, ಅದರಿಂದ ಆಗುವ ಪರಿಣಾಮ, ಕತೆಯನ್ನು ಒಂದು ಹೊಸ ಆಯಾಮಕ್ಕೆ ಕರೆದೊಯ್ಯುತ್ತವೆ. ಇವೆಲ್ಲದರ ಮೇಲೆ ಬೋನಸ್ ಎಂಬಂತೆ ನನಗೆ ಚಿರಪರಿಚಿತವಾದ ಮಂಗಳೂರು-ಮಡಿಕೇರಿ-ಮೈಸೂರುಗಳಲ್ಲೇ ಕತೆ ಸಾಗುತ್ತದೆ.

   ಬಬಿತಾಳಿಗೆ ಶೇಖರನು ರಾಜಾಸೀಟ್ ನಲ್ಲಿ ಗೆಜ್ಜೆ ಕೊಡುವ ವರ್ಣನೆ, ಕಲ್ಲುಟ್ಟಿ-ಪಂಜುರ್ಲಿ ದೈವಗಳ ಉಲ್ಲೇಖ, ತಣ್ಣೀರುಬಾವಿಯ ಮರಕಲರ ಜೀವನದ ವಿವರಣೆಗಳು, ಕತೆಯ ಕೊನೆಯಲ್ಲಿ ಭೀಮನಿಗೆ ಬರುವ ದುಃಸ್ಥಿತಿ ಎಲ್ಲವೂ ನನ್ನ ಮನಸ್ಸಿನಲ್ಲಿ ಹೊಚ್ಚಹೊಸತಾಗಿಯೇ ಅಚ್ಚು ಹಾಕಿವೆ. ಈ ಪುಸ್ತಕದ ಗುಂಗು ನನ್ನಲ್ಲಿ ಹಲವು ದಿನ/ತಿಂಗಳು ಇರುವುದು ನಿಸ್ಸಂದೇಹ!

   ಕೊನೆಯದಾಗಿ ಅನುಗ್ರಹ ಪ್ರಕಾಶನದವರು ಒಂದು ವಿಶಿಷ್ಟ ಗಾತ್ರ ಮತ್ತು ಕಾಗದದಲ್ಲಿ ಇದನ್ನು ಮುದ್ರಿಸಿ ಈ ಪುಸ್ತಕದ ವಿಶಿಷ್ಟತೆಯನ್ನು ಪರಿಪೂರ್ಣಗೊಳಿಸಿದೆ.

   ಅನುಷ್ ಶೆಟ್ಟಿಯವರಿಗೆ ಹೃದಯಪೂರ್ವಕ ಧನ್ಯವಾದಗಳು. ಇವರ ಉಳಿದ ಪುಸ್ತಕಗಳನ್ನು ಓದಿ ಮುಗಿಸುವಷ್ಟು ಫ್ಯಾನ್ / ಅಭಿಮಾನಿಯಾಗಿದ್ದೇನೆ.

 

- ವಿಠಲ್ ಶೆಣೈ

Tags: ಕನ್ನಡ ಪುಸ್ತಕ, kannada book review, ಜೋಡ್ಪಾಲ