ತಾಳಿಕೋಟೆಯಲ್ಲಿ ಭರವಸೆ

Posted on: 29 Jul 2018

Category: Kannada Blog

Blog Views: 2454

"ಈ ಪುಸ್ತಕದ ರಚನೆಗೆ ನಾನು ಹೆಚ್ಚು ಕಮ್ಮಿ ಎರಡು ವರುಷ ವ್ಯಯಿಸಿದ್ದೇನೆ. ಈ ಎರಡು ವರ್ಷಗಳು ನನಗೆ ಬಹಳವಾದ ಅನುಭವ, ಅರಿಕೆ, ಕಲಿಕೆ, ತಿಳುವಳಿಕೆಗಳನ್ನು ಕೊಟ್ಟಿವೆ. ಹೊಸ ಜನರನ್ನು ಪರಿಚಯಿಸಿವೆ, ಹೊಸ ವಿಷಯಗಳನ್ನು ತಿಳಿಸಿದೆ, ಹಳೆಯ ನೆನಪುಗಳನ್ನು ಮರುಕಳಿಸಿದೆ. ಇದನ್ನು ಬರೆಯುವ ಪ್ರಕ್ರಿಯೆಯು ನನಗೆ ಅತಿಯಾದ ಸಂತಸವನ್ನು ನೀಡಿದೆ."

   ಈ ಬ್ಲಾಗ್ ಬರೆಯುವಾಗ ನನ್ನ ಮೊದಲ ಕಾದಂಬರಿ ‘ತಾಳಿಕೋಟೆಯ ಕದನದಲ್ಲಿ’ ಇನ್ನೂ ಮುದ್ರಣದಲ್ಲಿದೆ. ಕೆಲವೇ ದಿನಗಳಲ್ಲಿ ಅದು ಹೊರ ಬರಲಿದೆ. ಈ ಕುರಿತು ನನಗೆ ಕುತೂಹಲ, ಕಾತರತೆ, ಭಯ ಎಲ್ಲವೂ ಒಟ್ಟಿಗೆ ಆಗುತ್ತಿದೆ. ಅದಕ್ಕೆ ಕಾರಣ ಇದು ಕಾದಂಬರಿ ಬರೆಯುವ ನನ್ನ ಮೊದಲ ಪ್ರಯತ್ನ. ಓದುಗರಿಗೆ ಇಷ್ಟವಾಗುತ್ತದೋ ಇಲ್ಲವೋ? ಕಥೆಯಲ್ಲಿ ಬರುವ ಕೆಲವು ಅಂಶಗಳು ಸರಿ ಇವೆಯೋ ಅಥವಾ ಬಾಲಿಶವಾಗಿದೆಯೋ? ಬರವಣಿಗೆಯ ಶೈಲಿ ಸರಿ ಇದೆಯೋ ಇಲ್ಲವೋ? ಹೀಗೆ ಅನೇಕ ಯೋಚನೆಗಳು. ಚಲನಚಿತ್ರರಂಗದವರಿಗೆ ಚಿತ್ರ ಬಿಡುಗಡೆಯಾಗುವ ಶುಕ್ರವಾರ ಇದೇ ತರಹ ಭಾವನೆಗಳು ಅಂತ ಓದಿದ ನೆನಪು. ನನಗೀಗ ಅದೇ ತರಹದ ಭಾವನೆಗಳು!

   ಆದರೆ ಒಂದು ವಿಷಯ ನನ್ನಲ್ಲಿ ಸ್ಪಷ್ಟವಾಗಿದೆ. ಈ ಪುಸ್ತಕದ ರಚನೆಗೆ ನಾನು ಹೆಚ್ಚು ಕಮ್ಮಿ ಎರಡು ವರುಷ ವ್ಯಯಿಸಿದ್ದೇನೆ. ಈ ಎರಡು ವರ್ಷಗಳು ನನಗೆ ಬಹಳವಾದ ಅನುಭವ, ಅರಿಕೆ, ಕಲಿಕೆ, ತಿಳುವಳಿಕೆಗಳನ್ನು ಕೊಟ್ಟಿವೆ. ಹೊಸ ಜನರನ್ನು ಪರಿಚಯಿಸಿವೆ, ಹೊಸ ವಿಷಯಗಳನ್ನು ತಿಳಿಸಿದೆ, ಹಳೆಯ ನೆನಪುಗಳನ್ನು ಮರುಕಳಿಸಿದೆ. ಇದನ್ನು ಬರೆಯುವ ಪ್ರಕ್ರಿಯೆಯು ನನಗೆ ಅತಿಯಾದ ಸಂತಸವನ್ನು ನೀಡಿದೆ. Enjoy the process, not the outcome ಅಂತ ಇಂಗ್ಲೀಷ್ ಮಾತಿನಂತೆ ನಾನಂತೂ ಈಗಾಗಲೇ ಎಂಜಾಯ್ ಮಾಡಿದ್ದೇನೆ.

   ನಾನು ಇದನ್ನು ಕಾದಂಬರಿ ರೂಪದಲ್ಲಿ ಬರೆಯುವ ಮೊದಲು, ಚಿತ್ರಕಥೆಯಾಗಿ ಸುಮಾರು ಅರ್ಧ ಭಾಗ ಬರೆದಿದ್ದೆ. ಆದರೆ ಇಂತಹ ಒಂದು ಕಥಾವಸ್ತು ಚಿತ್ರೀಕರಿಸಲು ಬಹಳ ಕಷ್ಟ ಅಂತ ಅರಿವಾಯಿತು. ಚರಿತ್ರೆಯನ್ನು ಒಳಗೊಂಡ ಈ ಕಥೆಯ ಚಿತ್ರೀಕರಣ ಕೂಡಾ ದುಂದು ವೆಚ್ಚದ್ದು. ಆದರೆ ಈ ಕಥಾವಸ್ತು ಜನರಿಗೆ ತಲುಪಿಸುವ ಪ್ರಯತ್ನವನ್ನು ಮಾಡಬೇಕನಿಸಿತು. ಅಂತೆಯೇ ಕಾದಂಬರಿ ರೂಪದಲ್ಲಿ ಬರೆಯಲಾರಂಭಿಸಿದೆ. ಸುಮಾರು ಅರ್ಧ ಬರೆದ ನಂತರ ಇದನ್ನು third person perspective ಬದಲು first person perspective ನಲ್ಲಿ ಬರೆಯಬೇಕನಿಸಿತು. ಹಾಗೆಯೇ ಮರು ಬರವಣಿಗೆ ಶುರು ಆಯಿತು. ಲೇಖನಕ್ಕೋಸ್ಕರ ಅಂತ ಒಂದೆರಡು ಹಂಪಿ ಪ್ರಯಾಣಗಳೂ ಆಯಿತು. ಮೊದಲ ಆವೃತ್ತಿ ಬರೆದ ನಂತರ ಅದನ್ನು ಸುಮಾರು ಎಂಟು ಬಾರಿಯಾದರೂ ಪರಿಶೀಲಿಸಿದೆ. ನನ್ನ ಆಪ್ತ ಮಿತ್ರ ಸತೀಶ್ ಕೂಡಾ ಈ ಹಂತದಲ್ಲಿ ಸಹಾಯ ಮಾಡಿದರು. ಬರೆದ ಕರಡುಪ್ರತಿ ತಿದ್ದಿಸಲು ಒಂದು ಸಾಫ್ಟ್ವೇರ್ ಕೂಡಾ ಬರೆದೆ. ಅದು, ಈ ತಾಣದಲ್ಲಿ ಇಲ್ಲಿದೆ. ಒಟ್ಟಿನಲ್ಲಿ ಒಬ್ಬ ಲೇಖಕ ಬರವಣಿಗೆಯಲ್ಲಿ ಎಷ್ಟು ಕಷ್ಟ ಪಡಬೇಕು ಅಂತ ಸಂಪೂರ್ಣ ತಿಳುವಳಿಕೆ ಬಂದಿದೆ.

   ಇದು ನನ್ನ ಮೊದಲ ಕಾದಂಬರಿ. ನಾನು ಬೇರೆ ಲೇಖಕರು ಓದುವಷ್ಟು ಸಾಹಿತ್ಯ ಪ್ರಪಂಚವನ್ನು ಇನ್ನೂ ಓದಿಲ್ಲ. ಪ್ರಯತ್ನ ಜಾರಿಯಲ್ಲಿದೆ. ಆಫೀಸ್ ಕೆಲಸದ ನಂತರ ಬರಹ, ಓದು, ಪರಿವಾರ ಎಲ್ಲವನ್ನೂ ಸರಿದೂಗಿಸಿ ಹೋಗುವ ಶತ ಪ್ರಯತ್ನ ಜಾರಿಯಲ್ಲಿದೆ. ನನ್ನ ಓದಿನ ಕೊರತೆ, ನನ್ನ ಬರಹದಲ್ಲಿ ನಿಮ್ಮಲ್ಲಿ ಪಳಗಿದ ಓದುಗರಿಗೆ ಎದ್ದು ಕಾಣಬಹುದು. ಈ ಲೇಖನ ಬರೆಯುವಾಗ ಈ ಕಾದಂಬರಿ ಓದಿದವರು ಕೇವಲ ಐದೋ ಆರು ಜನ. ಆದುದರಿಂದ ಓದುಗರ ಮಿಡಿತ ಹೇಗಿದೆ ಅಂತ ಇನ್ನೂ ಗೊತ್ತಿಲ್ಲ. ಬಹುಶಃ ಆ ಅನಿಶ್ಚಿತತೆಯೇ ಒಂದು ವಿಚಿತ್ರ ಆನಂದ ನೀಡುತ್ತಿದೆ. ಇನ್ನು ಕೆಲವು ದಿನಗಳಲ್ಲಿ ಪರಿಣಾಮ ಬರಬಹುದು. ಅಲ್ಲಿಯ ವರೆಗೆ ಭರವಸೆಯಲ್ಲಿರುತ್ತೇನೆ!

   ಕಾದಂಬರಿಯ ಬಗ್ಗೆ ಈ ಕೊಂಡಿಯಲ್ಲಿ ವಿವರ ಇದೆ. http://vittalshenoy.com/pages/taalikote.go?bookId=1

 

 

Tags: ತಾಳಿಕೋಟೆಯಲ್ಲಿ ಭರವಸೆ, ತಾಳಿಕೋಟೆಯ ಕದನದಲ್ಲಿ, ವಿಠಲ್ ಶೆಣೈ