"ಪುಸ್ತಕಗಳನ್ನು ಪುಟ ಮುಟ್ಟಿ ಓದಿದರೆ ಮಾತ್ರ ಅದು ನಿಜವಾದ ಪುಸ್ತಕ ಓದು ಅನ್ನುವವರಿಗೆ ನನ್ನದೊಂದು ಪ್ರಶ್ನೆ. ನಿಮಗೆ ಬರುವ ದುಡ್ಡನ್ನು ಯಾರಾದರೂ ಬ್ಯಾಂಕ್ ಟ್ರಾನ್ಸ್ಫರ್ ಮಾಡಿ ಪಾವತಿಸಿದರೆ 'ಅಯ್ಯೋ ನಾನು ಕಾಗದದ ನೋಟ್ ಗಳನ್ನು ಮುಟ್ಟಿ ನೋಡಲಿಲ್ಲ, ಹಾಗಾಗಿ ನೀವು ದುಡ್ಡು ಪಾವತಿಸಿಲ್ಲ' ಎಂದು ಕೇಳುವಿರಾ?"
ಇ-ಪುಸ್ತಕ (e-book) ಬೇಡವೇ ಬೇಡ. ಅದಕ್ಕೆ feel ಇಲ್ಲ. ಕೈಯಲ್ಲಿ ಪುಸ್ತಕ ಹಿಡಿದು ಓದುವಷ್ಟು ಮಜಾ ಬರುವುದಿಲ್ಲ! ಪೇಪರ್ ಪುಸ್ತಕಗಳೇ ನಿಜವಾದ ಪುಸ್ತಕಗಳು.
ಇದು ಈಗಲೂ ಹಲವರು ಹೇಳುವ ಹಲುಬು! ಇದರಲ್ಲಿ ನಾನೂ ಒಬ್ಬನಾಗಿದ್ದೆ. ಇತ್ತೀಚಿಗೆ ಕೆಲವು ತಿಂಗಳುಗಳ ಹಿಂದೆ ನನ್ನ ಈ ಅಭಿಪ್ರಾಯ ಬದಲಾಗಿದೆ. ಹಾಗಾಗಿ ಇದರ ಬಗ್ಗೆ ಬರೆಯೋಣ ಅನಿಸಿತು.
ಪುಸ್ತಕಗಳ ಬಗ್ಗೆ ಮಾತಾಡುವ ಮೊದಲು ಚಲನಚಿತ್ರಗಳ ಬಗ್ಗೆ ಮಾತಾಡೋಣ. ಚಲನಚಿತ್ರಗಳನ್ನು ಥಿಯೇಟರ್ / ಮಲ್ಟಿಪ್ಲೆಕ್ಸ್ ಗಳಲ್ಲಿ ನೋಡಿದಷ್ಟು ಮಜಾ ಬೇರೆ ಎಲ್ಲೂ ಸಿಗುವುದಿಲ್ಲ, ಅದಂತೂ ನಿಜ. ಹಾಗೆಂದ ಮಾತ್ರಕ್ಕೆ ನನಗೆ ಡಾ. ವಿಷ್ಣುವರ್ಧನ್ ರವರ 'ನಿಷ್ಕರ್ಷ' ಸಿನೆಮಾ ಥಿಯೇಟರ್ ನಲ್ಲಿ ನೋಡುವ ಆಸೆ. ಹಾಗೆಯೇ ಹಿಂದಿಯ 'ಫ್ಯಾಮಿಲಿ ಮ್ಯಾನ್' ಸರಣಿಯನ್ನೂ ದೊಡ್ಡ ಪರದೆಯ ಮೇಲೆ ನೋಡುವ ಬಯಕೆ. ಇದು ಸಾಧ್ಯವೇ? 'ನಿಷ್ಕರ್ಷ' ಚಲನಚಿತ್ರ 90ರ ದಶಕದಲ್ಲಿ ಚಿತ್ರಮಂದಿರಗಳಲ್ಲಿ ಬಂದು ಹೋಯಿತು. ಈಗ ಅದನ್ನು ಚಿತ್ರಮಂದಿರದಲ್ಲಿ ನೋಡುವ ಬೇಡಿಕೆ ಬಹಳ ಕಡಿಮೆ. ಹಾಗೆಯೇ 'ಫ್ಯಾಮಿಲಿ ಮ್ಯಾನ್' ಸರಣಿಯ ನಿರ್ಮಾಪಕರು ಅದನ್ನು ಚಿತ್ರಮಂದಿರಗಳಿಗೆ ಕಳುಹಿಸುವ ಪ್ಲಾನ್ ಕೂಡಾ ಮಾಡಲಿಲ್ಲ. ಯಾಕೆಂದರೆ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಮಾಡುವುದು ಒಂದು ದೊಡ್ಡ ಬಂಡವಾಳ ಬೇಕಾದ ವಿಷಯ. ಆ ಬಂಡವಾಳ ಹಿಂತಿರುಗಿ ಲಾಭ ಬರುವಷ್ಟು ಬೇಡಿಕೆ ಇದ್ದರೆ ಮಾತ್ರ ಚಿತ್ರಗಳು ದೊಡ್ಡ ಪರದೆಯ ಮೇಲೆ ಮೂಡುತ್ತವೆ. ಹಲವು ಕಿರುಚಿತ್ರಗಳು, ಮರು ವೀಕ್ಷಣೆ ಚಿತ್ರಗಳು, ವಿಡಿಯೋಗಳನ್ನು ನಾವು ಟಿ.ವಿ, ಮೊಬೈಲ್, ಲ್ಯಾಪ್ ಟಾಪ್ ಗಳಲ್ಲಿ ಯು-ಟ್ಯೂಬ್, ನೆಟ್ ಫ್ಲಿಕ್ಸ್, ಪ್ರೈಮ್, ಉದಯ ಚಾನೆಲ್ ಮುಖಾಂತರ ನೋಡುತ್ತಿಲ್ಲವೇ? ಪ್ರತಿಯೊಂದು ವೀಕ್ಷಣೆಯ ಮಾಧ್ಯಮಗಳನ್ನು ಥಿಯೆಟರ್ ಗೇ ಹೋಗಿ ನೋಡುವುದಿದ್ದರೆ ಅದು ಎಷ್ಟು ದುಬಾರಿ, ಎಷ್ಟು ಅಪ್ರಾಯೋಗಿಕ(impractical)? ಎಷ್ಟೊಂದು ಚಿತ್ರಗಳನ್ನು ನಾವು ನೋಡದೆ ಮಿಸ್ ಮಾಡಿ ಕೊಳ್ಳುತ್ತಿದ್ದೆವು, ಅಲ್ಲವೇ? ಒಟ್ಟಿನಲ್ಲಿ ಹೇಳುವುದಾದರೆ ವೀಕ್ಷಣೆಯ ವಿಷಯ(visual contents) ಗಳನ್ನು ನಾವು ಕೇವಲ ಥಿಯೇಟರ್ ಅಲ್ಲದೇ ಇತರ ಮಾಧ್ಯಮಗಳಲ್ಲೂ ನೋಡುತ್ತೇವೆ, ಅಲ್ಲವೇ?
ಪೇಪರ್-ಪುಸ್ತಕ vs ಡಿಜಿಟಲ್ ಪುಸ್ತಕಗಳ ವಾದವೂ ಇದೇ ರೀತಿ. ಎಲ್ಲಾ ಪುಸ್ತಕಗಳು ಮುದ್ರಣಾಲಯಕ್ಕೆ ಹೋಗಿ ನಂತರ ಓದುಗರ ಕೈ ಸೇರುವುದು ಕಷ್ಟದ ವಿಷಯವೇ. ಅದಕ್ಕೆ ಬಂಡವಾಳ ಬೇಕು. ಅವನ್ನು ವಿತರಿಸುವ ವ್ಯವಸ್ಥೆ ಬೇಕು. ಅದನ್ನು ಕೊಂಡು ಕೊಳ್ಳುವ ವ್ಯವಸ್ಥೆಯೂ ಸುಲಭವಾಗಿರಬೇಕು. ಮುದ್ರಣವೆಂದರೆ 500-1000 ಪ್ರತಿಗಳ ಅಚ್ಚು ಹಾಕಬೇಕು. ಹೊಸ ಲೇಖಕರಿಗೆ ಪ್ರಕಾಶಕರು ಸಿಗುವುದು ಕಷ್ಟದ ಸಂಗತಿ. ಸಿಕ್ಕಿದರೂ ಹೆಚ್ಚಿನ ಪ್ರಕಾಶಕರು 500 ಪ್ರತಿ ಮುದ್ರಿಸಿ, ಅದರಲ್ಲಿ 300 ಪ್ರತಿಗಳನ್ನು ಲೈಬ್ರರಿಗೆ ಕಳುಹಿಸಿ ಉಳಿದ ಇನ್ನೂರರಲ್ಲಿ ಸ್ವಲ್ಪವನ್ನು ತಮ್ಮ ಬಳಿ ಇಟ್ಟು ಕೊಂಡು, ಮಿಕ್ಕ ಪ್ರತಿಗಳನ್ನು ಲೇಖಕರಿಗೆ ಖರೀದಿಸಲು ಹೇಳುತ್ತಾರೆ. ಬಹುತೇಕ ಪುಸ್ತಕಗಳು ಮಾರಾಟದ ಮಳಿಗೆಗಳನ್ನು ಕಾಣುವ ಬದಲು, ಲೇಖಕರ ಮನೆಯ ಅಟ್ಟದಲ್ಲಿ ಧೂಳು ಹಿಡಿದು ಕೂರುತ್ತವೆ. ಹೀಗಿದ್ದಲ್ಲಿ 100-200 ಪ್ರತಿಗಳನ್ನು ಮಾತ್ರ ಮಾರುವ ಸಾಮರ್ಥ್ಯವುಳ್ಳ ಲೇಖಕರು ಪುಸ್ತಕಗಳನ್ನು ಹೇಗೆ ಓದುಗರಿಗೆ ತಲುಪಿಸುವುದು? ಸಾವಿರ ಪುಸ್ತಕಗಳ ಅಚ್ಚು ಹಾಕಿ 800 ಅನ್ನು ಮನೆಯಲ್ಲೇ ಇಟ್ಟು ಪೂಜೆ ಮಾಡುವುದೇ? ಎಷ್ಟೊಂದು ದುಡ್ಡು ಹಾಗೂ ಮರಗಳು ವ್ಯರ್ಥವಾದವು, ಅಲ್ಲವೇ? ಹಾಗೆಯೇ ಒಂದು ಮುದ್ರಣವನ್ನು ಕಂಡ ಕೃತಿಯ ಪ್ರತಿಗಳೆಲ್ಲವೂ ಖಾಲಿಯಾಗಿವೆ, ಮರು ಮುದ್ರಣ ಮಾಡುವಷ್ಟು ಬೇಡಿಕೆ ಇಲ್ಲ(ಮೇಲೆ ಹೇಳಿದ ನಿಷ್ಕರ್ಷ ಸಿನೆಮಾದ ಉದಾಹರಣೆಯಂತೆ), ಆಗ ಆ ಕೃತಿಯನ್ನು ಎಲ್ಲಿ ಮತ್ತು ಹೇಗೆ ಓದುವುದು? ಅಂದರೆ ಇದು ಕಡಿಮೆ ಬಜೆಟ್ ನ ಸಿನೆಮಾವನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವ ಸಾಹಸಕ್ಕೆ ಹೋಲಿಸಿದಂತೆ ಅಲ್ಲವೇ?
ಇಂತಹ ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುವುದು ಇ-ಬುಕ್ ಮತ್ತು ಆಡಿಯೋ ಬುಕ್. ಅತಿ ಕಡಿಮೆ ಖರ್ಚಿನಲ್ಲಿ ಪುಸ್ತಕವನ್ನು ಓದುಗರಿಗೆ ತಲುಪಿಸುವ ವಿಧಾನ. ಯಾವುದೇ ಲೇಖಕರು ಬರೆಯುವ ಪುಸ್ತಕಗಳಲ್ಲಿ ಎಲ್ಲವೂ ಪೇಪರ್ ಪುಸ್ತಕವಾಗಿ ಸಂಗ್ರಹ ಯೋಗ್ಯವಿರುವುದಿಲ್ಲ. ಒಮ್ಮೆ ಓದಿ ನಂತರ ರದ್ದಿಗೋ ಅಥವಾ ಅವರು-ಇವರುಗಳಿಗೆ ಕೊಡುವ ಪುಸ್ತಕಗಳು ಹಲವು ಇರುತ್ತವೆ. ಕನ್ನಡದ ಎಲ್ಲಾ ಪುಸ್ತಕಗಳು ಇ-ಪುಸ್ತಕವಾಗಿ ವಿವಿಧ ಪ್ಲಾಟ್ಫಾರ್ಮ್ ಗಳಲ್ಲಿ ಲಭ್ಯವಿದ್ದರೆ, ನನ್ನಂತಹ ಓದುಗರಿಗೆ ಮೊದಲು ಪುಸ್ತಕವನ್ನು ಡಿಜಿಟಲ್ ಮಾಧ್ಯಮದಲ್ಲಿ ಓದಿ, ನಂತರ ಸಂಗ್ರಹ ಯೋಗ್ಯ ಪುಸ್ತಕಗಳು ಮಾತ್ರ ಪೇಪರ್ ಪುಸ್ತಕ ಕೊಂಡು(ಲಭ್ಯವಿದ್ದರೆ!) ಕಪಾಟಿನಲ್ಲಿ ಇಡುವ ಮಾರ್ಗವೊಂದು ತೆರೆಯುತ್ತದೆ. ಅದಲ್ಲದೇ ಕನ್ನಡಕ ಹಾಕಿ ಓದುವ ನಾನು, ಮೊಬೈಲ್ ನಲ್ಲಿ ಇ-ಪುಸ್ತಕಗಳ ಫಾಂಟ್ ಗಳನ್ನು ಸಾಕಷ್ಟು ದೊಡ್ಡದು ಮಾಡಿ ಪೇಪರ್ ಪುಸ್ತಕಗಳ ಫಾಂಟ್ ಗಿಂತಲೂ ಸುಲಭವಾಗಿ ಓದುತ್ತೇನೆ. ಜೊತೆಗೆ ಮೊಬೈಲ್ ಇದ್ದರೆ ಎಲ್ಲಿ ಸಮಯ ಸಿಗುತ್ತದೋ ಅಲ್ಲಿ ಓದುವ ಸೌಕರ್ಯ ಇರುತ್ತದೆ. ಇನ್ನೂ ಹೆಚ್ಚು ಹೇಳಬೇಕೆಂದರೆ ನಿಮ್ಮ ಮೊಬೈಲ್ ಗಾತ್ರವು ಪೇಪರ್ ಪುಸ್ತಕಗಳಿಗಿಂತ ಬಹಳ ಕಡಿಮೆ ಇರುವುದರಿಂದ, ಇ-ಪುಸ್ತಕಗಳನ್ನು ಮಂಚದ ಮೇಲೆ ಮಲಗಿ, ನೆಲದ ಮೇಲೆ ಒರಗಿ ವಿವಿಧ ಭಂಗಿಗಳಲ್ಲೂ ಓದಬಹುದು :) ! ಆಡಿಯೋ ಪುಸ್ತಕಗಳಾದರೆ ಕಾರ್ ಡ್ರೈವಿಂಗ್ ಮಾಡುವಾಗ, ಅಡುಗೆ ಮಾಡುವಾಗ, ಪಾತ್ರೆ ತೊಳೆಯುವಾಗ ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ಓದಬಹುದು... ಅಲ್ಲಾ ಕೇಳಬಹುದು! ಪೇಪರ್ ಪುಸ್ತಕಗಳಂತೆ ಅದನ್ನು ಓದಲು ಒಂದು ದೊಡ್ಡ ಪೂರ್ವ ಸಿದ್ಧತೆ ಮಾಡಿಕೊಳ್ಳುವ ಅವಶ್ಯಕತೆ ಡಿಜಿಟಲ್ ಪುಸ್ತಕಗಳಿಗೆ ಇಲ್ಲ. ಅದಲ್ಲದೆ ಇ-ಪುಸ್ತಕಗಳ ಪುಟಗಳ ಹಿನ್ನೆಲೆ ಬಣ್ಣವನ್ನು ನಿಮಗೆ ಬೇಕಾದಂತೆ ಬದಲಿಸಲೂ ಬಹುದು. ಔಟ್ ಆಫ್ ಸ್ಟಾಕ್ ಆಗುವ ಪ್ರಮೇಯವೇ ಇಲ್ಲ! ಮರು ಮುದ್ರಣದ ಚಿಂತೆ ಇಲ್ಲ. ಅಂತರ್ಜಾಲ ಸಿಗುವ ಪ್ರಪಂಚದ ಯಾವುದೇ ಮೂಲೆಯಿಂದ ಕೊಳ್ಳ ಬಹುದು. ಒಂದು ಪುಸ್ತಕವನ್ನು ಓದುವ ತುಡಿತ ಅತಿಯಾಗಿ ಆದರೆ ಎರಡೇ ನಿಮಿಷಗಳಲ್ಲಿ ಅದನ್ನು ಕೊಂಡು, ಎರಡೇ ಗಂಟೆಗಳಲ್ಲಿ ಓದಿ ಮುಗಿಸುವ ಜಟಾಪಟಿಯೂ ಸಾಧ್ಯ. ಪೇಪರ್ ಪುಸ್ತಕಗಳಲ್ಲಿ ಇದು ಸಾಧ್ಯವೇ?
ನನ್ನ ಈ ಲೇಖನ ಓದಿ ಕೆಲವು ಪ್ರಕಾಶಕರು ಹಾಗೂ ಮುದ್ರಣಾಲಯದ ಮಾಲಿಕರಿಗೆ ಅಸಮಾಧಾನವಾಗಬಹುದು. ಆದರೆ ಸಪ್ರಯೋಜನಕಾರಿ ಬದಲಾವಣೆಗಳು ಬದುಕಿಗೆ ಅತ್ಯಗತ್ಯ, ಇವು ಶತಮಾನಗಳಿಂದಲೂ ಆಗುತ್ತಲಿವೆ. ಮುಂದೆಯೂ ಆಗಲಿವೆ. ಗ್ರಾಹಕರಿಗೆ ಅನುಕೂಲವಾಗುವಂತೆ ವ್ಯವಹಾರ ಬದಲಾವಣೆಗಳು ಆಗಬೇಕು ವಿನಃ ತಮ್ಮ ವ್ಯವಹಾರಕ್ಕೆ ತಕ್ಕಂತೆ ಗ್ರಾಹಕರು ಹೊಂದಿ ಕೊಂಡು ಇರಬೇಕು ಎನ್ನುವ ನಿಲುವು ಇರಬಾರದು.
ಪುಸ್ತಕಗಳನ್ನು ಪುಟ ಮುಟ್ಟಿ ಓದಿದರೆ ಮಾತ್ರ ಅದು ನಿಜವಾದ ಪುಸ್ತಕ ಓದು ಅನ್ನುವವರಿಗೆ ನನ್ನದೊಂದು ಪ್ರಶ್ನೆ. ನಿಮಗೆ ಬರುವ ದುಡ್ಡನ್ನು ಯಾರಾದರೂ ಬ್ಯಾಂಕ್ ಟ್ರಾನ್ಸ್ಫರ್ ಮಾಡಿ ಪಾವತಿಸಿದರೆ "ಅಯ್ಯೋ ನಾನು ಕಾಗದದ ನೋಟ್ ಗಳನ್ನು ಮುಟ್ಟಿ ನೋಡಲಿಲ್ಲ, ಹಾಗಾಗಿ ನೀವು ದುಡ್ಡು ಪಾವತಿಸಿಲ್ಲ" ಎಂದು ಕೇಳುವಿರಾ?
ಮುಂದಿನ ಸಲ ಪುಸ್ತಕದಂಗಡಿಗೆ ಹೋದಾಗ(ಹೋದರೆ!), ಯಾವುದಾರೂ ಪುಸ್ತಕ ಎತ್ತಿ ಇದರ ಇ-ಪುಸ್ತಕ ಲಭ್ಯವಿದೆಯೇ ಎಂದು ಮೊಬೈಲ್ ನಲ್ಲಿ ನೋಡುವಷ್ಟು ಬದಲಾವಣೆಗಳು ನನ್ನಲ್ಲಿ ಆಗಿವೆ.