ಹನಿಗೂಡಿ ಮತ್ತೊಂದು ಹಳ್ಳ

Posted on: 28 Jul 2018

Category: Kannada Blog

Blog Views: 1097

ಇದು ನನ್ನ ಹನಿಗವನಗಳ ಎರಡನೇ ಭಾಗ. ಮೊದಲನೇ ಭಾಗ ಇಲ್ಲಿದೆ http://vittalshenoy.com/pages/myBlogs.go?blogId=5

 

ತೆರೆದ ಕಿಟಿಕಿ

ಸೆಖೆಯಪ್ಪಾ ಸೆಖೆ ಎಂದು

ತೆರೆದಳು ಅವಳ ರೂಮಿನ ಕಿಟಿಕಿ

ಪಕ್ಕದ ಮನೆಯ ಪುಂಡ ಅಲ್ಲೇ 

ನಿಂತಿದ್ದ ಅವಳನ್ನು ನೋಡಿ ಕಣ್ಣು ಮಿಟುಕಿ

 

ಮಾತು ಮಾತಿಗೆ ಏಟು

ಶಾಲೆಯಲ್ಲಿದ್ದಾಗ ಕೊಡುತ್ತಿದ್ದ ಅವನು

ಮಾತು ಮಾತಿಗೆ ಟೀಚರ್ಸ್ಗೆ ತಿರುಗೇಟು

ಇಂದು ಮಾಡುತಿರುವನು ಅವನು

ರಾಜಕೀಯ ಚೀಟರ್ಸ್ ಜೊತೆ ಟಿವಿಯಲ್ಲಿ ಡಿಬೇಟು

 

ಹರಿದ ಕಥೆ

ಹರಿದು ಹೋದರೆ ತನ್ನ ಮೌಲ್ಯ ಕಳೆಯುವುದು

ನನ್ನ ಪರ್ಸಿನಲ್ಲಿದ್ದ ರೂಪಾಯಿ ನೋಟು

ಹರಿದು ಹೋದರೆ ತನ್ನ ಮೌಲ್ಯ ಗಳಿಸುವುದು

ನಾನು ಹಾಕಿದ್ದ ಜೀನ್ಸ್ ಪ್ಯಾಂಟು

 

ಆಮಂತ್ರಣ

ನಾನೊಂದು ತೀರ, ಅವಳೊಂದು ತೀರ

ಆದರೂ ನಾಳೆ ನಮ್ಮ ಮದುವೆ, ದಯವಿಟ್ಟು ಬರ್ತೀರಾ?

 

ಮಿನುಗುತಾರೆ

ಕಾಲೇಜಿನಿಂದ ಹೊಸದಾಗಿ ಸೇರಿ ಕೊಂಡ

ಅವನು ಪ್ರತಿಭಾವಂತ, ಟೀಮಿನ ಮಿನುಗು ತಾರೆ

ಆದರೆ ಅವನನ್ನು ಚೆನ್ನಾಗಿ ಬಳಸಿ ಕೊಂಡ

ಅವನ ಮ್ಯಾನೇಜರ್, ಈಗ ಟೀಮಲ್ಲಿ  ಅವರೇ ಮಿನುಗುತ್ತಾರೆ!

 

ಹಂಸಧ್ವನಿ

ಖಾಸಗಿ ಬಸ್ ತುಟ್ಟಿ ಅಂತ

ನಾನು ಹತ್ತಿದೆ ರಾಜಹಂಸ
ಮಂಗಳೂರು ತಲುಪುವುದರೊಳಗೆ
ನನ್ನ ಬೆನ್ನೆಲುಬುಗಳು ಧ್ವಂಸ

 

Tags: ಹನಿಗೂಡಿ ಹಳ್ಳ- 2, ಹನಿಗವನ