Ondu Shikaariya Kathe

Posted on: 14 Dec 2020

Category: Movie Review

Blog Views: 1690

Ondu Shikariya Kathe (2020) - IMDb

 

ಒಂದು ಶಿಕಾರಿಯ ಕಥೆ, ಹೆಸರು ಬಹಳ ಆಕರ್ಷಣೀಯವಾಗಿದೆ, ಈ ಕಾರಣದಿಂದ ಒಂದು ಮಟ್ಟದ ನಿರೀಕ್ಷೆಯನ್ನಿಟ್ಟು ಈ ಚಿತ್ರ ನೋಡಿದೆ, ನಿರೀಕ್ಷೆಗೂ ಮೀರಿ ಅದ್ಭುತವೆನಿಸಿತು ಈ ಚಿತ್ರ.
 
ಒಂದು ಉತ್ತಮ ಚಿತ್ರಕ್ಕೆ ಚಿತ್ರಕತೆಯೇ ಬೆನ್ನೆಲುಬು, ಅದಿಲ್ಲದೆ ಚಿತ್ರಗಳು ನೆಟ್ಟಗೆ ನಿಂತು ನಿಮ್ಮ ಮನಸ್ಸನ್ನು ಕಾಡಿ, ಮನಸ್ಸು ಸೂರೆಗೊಳ್ಳುವುದಿಲ್ಲ. ಇಲ್ಲಿ ಚಿತ್ರಕತೆ ಅತ್ಯುತ್ತಮವಾಗಿ ಕಟ್ಟಿದ್ದಾರೆ. ಕೇವಲ ಐದು ಪಾತ್ರಗಳು, ಅವುಗಳ ಪಾತ್ರ ಪೋಷಣೆ ಈ ಚಿತ್ರಕ್ಕೆ ಮೆರುಗು ನೀಡಿವೆ. ಪ್ರತಿಯೊಂದು ದೃಶ್ಯದ ಪ್ರವೇಶ ಮತ್ತು ನಿರ್ಗಮನ ಬಹಳ ಸೂಕ್ತವಾಗಿದೆ. non linear ನಿರೂಪಣೆ ಇದ್ದರೂ ಎಲ್ಲೂ ಗೊಂದಲವಾಗದಂತೆ ಚಿತ್ರ ಮುಂದುವರೆಯುತ್ತದೆ. ಇನ್ನು ಚಿತ್ರದಲ್ಲಿ ಬರುವ ಸ್ಥಳಗಳು, ಆ ಹಳೆಯ ಮನೆಗಳು, ಪ್ರತಿಯೊಬ್ಬರ ಪಾತ್ರಾಭಿನಯಗಳು ನನ್ನನ್ನು ಸೂರೆಗೊಳಿಸಿತು.
 
ಚಿತ್ರದ ಕತೆಯು ಅನೇಕ ಪದರಗಳನ್ನು ಹೊಂದಿದ್ದು, ಒಂದೊಂದು ಪದರ ಕಳಚಿ ಬಂದಾಗ ಚಿತ್ರವು ಒಂದು ಹೊಸ ಮಜಲನ್ನು ತಲುಪುತ್ತಿದೆ ಅನಿಸುತ್ತದೆ. ಬೇರೆ ಬೇರೆ ಫ್ರೇಮ್ ಗಳಲ್ಲಿ ಇಲ್ಲಿ ಶಿಕಾರಿ ಯಾರು, ಅವರ ಬೇಟೆ ಏನು ಎಂದು ಸೂಚ್ಯವಾಗಿ ನಿರ್ದೇಶಕರು ಹೇಳ ಹೊರಟಿದ್ದಾರೆ. ಚಿತ್ರ ಬಹಳ ನಿಧಾನಗತಿಯಲ್ಲಿ ಸಾಗಿದೆ ಎಂದು ಕೆಲವರು ಹೇಳಿದ್ದಾರೆ, ಬಹುಶಃ ಅವರು ಹೈವೇ ಇರಲಿ, ಸಣ್ಣ ಗಲ್ಲಿಗಳು ಇರಲಿ, ಒಂದೇ ವೇಗದಲ್ಲಿ ಗಾಡಿ ಓಡಿಸುವವವರು! ಚಿತ್ರದ ವೇಗ ಸರಿಯಾಗಿಯೇ ಇರುವುದಲ್ಲದೆ, ಎಲ್ಲೂ ಅನಗತ್ಯ ಅಂಶಗಳನ್ನು ಸೇರಿಸಿ ನಿರ್ದೇಶಕ ಚಿತ್ರಕ್ಕೆ ಕಮರ್ಷಿಯಲ್ ಅಂಶಗಳನ್ನು ಸೇರಿಸಿಲ್ಲ ಎಂದು ಹೇಳಬಹುದು.
 
ಲೇಖಕನೊಬ್ಬ ತನ್ನ ತಂದೆಯ ಆಸೆಯನ್ನು ಈಡೇರಿಸಲು ಬಂದೂಕು ಹಿಡಿದು ಶಿಕಾರಿಗೆ ಹೋದಾಗ ನಡೆಯುವ ಅವಘಡ ಹಾಗೂ ಅದರ ಸುತ್ತ ಮುತ್ತ ನಡೆಯುವ ಘಟನೆಗಳೇ ಈ ಚಿತ್ರದ ಮೂಲ, ಹೆಚ್ಚು ಕತೆ ಹೇಳಿದರೆ spoiler ಆಗಿ ಬಿಡುತ್ತದೆ. ಕರಾವಳಿಯ ಸೊಗಸು, ಯಕ್ಷಗಾನದ ಹಿನ್ನೆಲೆ ಚಿತ್ರಕ್ಕೆ ಇನ್ನಷ್ಟು ಮೆರುಗು ನೀಡಿವೆ. ಬಹುಶಃ ಉಳಿದವರು ಕಂಡಂತೆ, ಲೂಸಿಯಾ ಮುಂತಾದ ಚಿತ್ರಗಳು ಕನ್ನಡದಲ್ಲಿ ಸೇರಿದ cult status ಅನ್ನು ಈ ಚಿತ್ರವೂ ಸೇರಬಹುದು. ಯಾವುದೇ ದೊಡ್ಡ ಸ್ಟಾರ್ ಕ್ಯಾಸ್ಟ್ ಇಲ್ಲದೆ ಸ್ಟಾರ್ ಗಳು ಪಾತ್ರಕ್ಕೆ ಹೊರೆ ಎನಿಸದೆ ತೆಗೆದಿರುವ ಚಿತ್ರ. ವಿಭಿನ್ನತೆಗಳನ್ನು ಕೂಡಿದ ಚಿತ್ರ ನೋಡಲು ಬಯಸುವವರು ಖಂಡಿತ ನೋಡಿ. ಇಡೀ ಚಿತ್ರ ತಂಡಕ್ಕೆ ಅಭಿನಂದನೆಗಳು, ಇನ್ನಷ್ಟು ಈ ತರಹದ ಚಿತ್ರಗಳು ತಮ್ಮಿಂದ ಹೊರಬರಲಿ.
 
ನನ್ನ ರೇಟಿಂಗ್:   4.5 out of 5
 
 

 

Tags: Ondu Shikaariya Kathe review, Kannada movie review